ಪೀಠಿಕೆ : ಬ್ಯಾಂಕಿನಲ್ಲಿ ಯಾವುದೇ ಖಾತೆಗಳನ್ನು ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕಿನ ಸೂಚನೆಯಂತೆ ಕೆ.ವೈ.ಸಿ. ನಿಯಮ ಪಾಲಿಸುವುದು ಕಡ್ಡಾಯವಾಗಿರುತ್ತದೆ. ಅದರ ಪ್ರಕಾರ ಫೋಟೋ ಸಹಿತ ಗುರುತಿನ ಚೀಟಿ, ವಿಳಾಸ ದೃಢೀಕರಣ ಇತ್ಯಾದಿಗಳನ್ನು ನೀಡಬೇಕಾಗಿರುತ್ತದೆ. ಬ್ಯಾಂಕಿನ ಖಾತೆಗಳನ್ನು ತೆರೆದ ಮೇಲೆ ನಿರಂತರವಾಗಿ ವ್ಯವಹಾರ ನಡೆಸುತ್ತಿರಬೇಕು. ವ್ಯವಹಾರ ನಡೆಸದೇ 10 ವರ್ಷಕ್ಕೆ ಮೇಲ್ಪಟ್ಟು ಸ್ಥಗಿತಗೊಂಡ ಖಾತೆಗಳನ್ನು ಮತ್ತು ಅವಧಿ ಮುಗಿದ ಠೇವಣಿಗಳನ್ನು ವಾಪಾಸ್ಸು ಪಡೆಯದೇ ಅಥವಾ ನವೀಕರಿಸದೇ 10 ವರ್ಷ ಮುಂದುವರೆದಿದ್ದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದನ್ವಯ ಡಿ.ಇ.ಎ.ಎಫ್. (DEAF) ಖಾತೆಗೆ ವರ್ಗಾವಣೆ ಮಾಡಲಾಗುವುದು.
ಬ್ಯಾಂಕಿನ ಯಾವುದೇ ಶಾಖೆಯಲ್ಲಿ 6(ಆರು)ತಿಂಗಳಿಗೂ ಮೇಲ್ಪಟ್ಟು ಉಳಿತಾಯ ಖಾತೆ ಹೊಂದಿರುವ ಖಾತೆದಾರರು ಪರಿಚಯಿಸಲ್ಪಟ್ಟಲ್ಲಿ ಆ ವ್ಯಕ್ತಿಯು ಉಳಿತಾಯ ಖಾತೆಯನ್ನು ತೆರೆಯಬಹುದಾಗಿದೆ. ಖಾತೆ ತೆರೆಯಲು ಫೋಟೋ ಸಹಿತ ಗುರುತಿನ ಚೀಟಿ, ವಿಳಾಸದ ದೃಢೀಕರಣ ಪ್ರತಿ, ಪಾನ್ ಕಾರ್ಡ್ ನ ಪ್ರತಿ ಇತ್ಯಾದಿಗಳನ್ನು ನೀಡಬೇಕಾಗಿರುತ್ತದೆ. ಪಾಸ್ ಪುಸ್ತಕ ಹಾಗೂ ಚೆಕ್ಕು ಪುಸ್ತಕವನ್ನು ಎಲ್ಲಾ ಖಾತೆದಾರರಿಗೂ ವಿತರಿಸಲಾಗುವುದು. ಈ ಖಾತೆಗಳಲ್ಲಿ ಚೆಕ್ಕು ಪುಸ್ತಕ ರಹಿತ ರೂ. 250/- ಹಾಗೂ ಚೆಕ್ಕು ಪುಸ್ತಕ ಸಹಿತ ರೂ.500/-ಗಳ ಶಿಲ್ಕನ್ನು ನಿಗದಿಗೊಳಿಸಲಾಗಿದೆ. ತಮಗೆ ವಿತರಿಸುವ ಪ್ರತಿ ಚೆಕ್ಕುಗಳ ಹಾಳೆಗೂ ರೂ.1/-ರಂತೆ ಖರ್ಚು ಹಾಕಲಾಗುವುದು. ಪ್ರತಿ ದಿನದ ಅಂತ್ಯಕ್ಕೆ ಇರುವ ಶಿಲ್ಕಿನ ಆಧಾರದ ಮೇಲೆ ಶೇ.3 ರಂತೆ ಬಡ್ಡಿಯನ್ನು ನೀಡಲಾಗುವುದು. ಖಾತಾ ವ್ಯವಹಾರವನ್ನು ಎರಡು ವರ್ಷಕ್ಕೆ ಮೇಲ್ಪಟ್ಟು ವ್ಯವಹರಿಸದೇ ಇದ್ದಲ್ಲಿ ಅಂಥ ಖಾತೆಗಳನ್ನು ಸ್ಥಗಿತಗೊಳಿಸಲಾಗುವುದು.
ಯಾವುದೇ ವ್ಯಕ್ತಿಯು ತಾನು ನಡೆಸುತ್ತಿರುವ ವ್ಯವಹಾರ ಘಟಕದ ಹೆಸರಿನಲ್ಲಿ ಅಥವಾ ಸಂಘ ಸಂಸ್ಥೆಗಳ ಹೆಸರಿನಲ್ಲಿ ಈ ಖಾತೆಯನ್ನು ತೆರೆಯಬಹುದಾಗಿದೆ. ಖಾತೆ ತೆರೆಯಲು ಸಂಸ್ಥೆಯ ನೋಂದಣಿ ಪ್ರತಿ, ಕರಾರು ಪತ್ರದ ಪ್ರತಿ, ಲೈಸೆನ್ಸ್, ಫೋಟೋ, ವಿಳಾಸ ದೃಢೀಕರಣ ಇತ್ಯಾದಿ ದಾಖಲೆಗಳನ್ನು ನೀಡಬೇಕಾಗಿದೆ. ಖಾತೆಯಲ್ಲಿ ರೂ.1000/- ಗಳ ಕನಿಷ್ಠ ಶಿಲ್ಕನ್ನು ವಿಧಿಸಲಾಗಿದೆ. ಈ ಖಾತೆಗೂ ಪಾಸ್ ಪುಸ್ತಕ ಮತ್ತು ಚೆಕ್ ಪುಸ್ತಕವನ್ನು ನೀಡಲಾಗುವುದು. ಖಾತೆದಾರರಿಗೆ ವಿತರಿಸುವ ಚೆಕ್ ಪುಸ್ತಕದ ಪ್ರತಿ ಹಾಳೆಗೂ ರೂ.2.50ಗಳ ಖರ್ಚು ಹಾಕಲಾಗುವುದು. ಖಾತಾ ವ್ಯವಹಾರಕ್ಕನುಗುಣವಾಗಿ ಆಡಳಿತ ಮಂಡಳಿಯು ಕಾಲಕಾಲಕ್ಕೆ ನಿಗದಿಸಲ್ಪಡುವ ಸಾದಿಲ್ವಾರು ಖರ್ಚು (Incidental Charges)ಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ವಿಧಿಸಲಾಗುವುದು. ಈ ಖಾತೆಗೆ ಯಾವ ಬಡ್ಡಿಯನ್ನು ನೀಡಲಾಗುವುದಿಲ್ಲ. ಖಾತೆಯನ್ನು ಎರಡು ವರ್ಷಕ್ಕೆ ಮೇಲ್ಪಟ್ಟು ವ್ಯವಹಾರ ನಡೆಸದಿದ್ದಲ್ಲಿ ಅಂಥ ಖಾತೆಯನ್ನು ಸ್ಥಗಿತಗೊಳಿಸಲಾಗುವುದು.
ನಿಶ್ಚಿತ ಠೇವಣಿಯನ್ನು ಕನಿಷ್ಠ 30 (ಮೂವತ್ತು ) ದಿವಸಗಳಿಗೆ ಹೂಡಿಕೆ ಮಾಡಬಹುದಾಗಿದೆ. ಕನಿಷ್ಠ ಮೊಬಲಗು ರೂ.500/- ಆಗಿರುತ್ತದೆ. ಈ ಖಾತೆಗೆ ಭಾರತೀಯ ರಿಸರ್ವ್ ಬ್ಯಾಂಕಿನ ಆದೇಶದಂತೆ ಕಾಲಕಾಲಕ್ಕೆ ಆಡಳಿತ ಮಂಡಳಿಯು ನಿರ್ಧರಿಸಲ್ಪಡುವ ಬಡ್ಡಿದರವನ್ನು ನೀಡಲಾಗುತ್ತದೆ. ಹಿರಿಯ ನಾಗರಿಕರ ಒಂದು ವರ್ಷಕ್ಕೂ ಮೇಲ್ಪಟ್ಟ ಠೇವಣಿ ಹಾಗೂ ರೂ.15.00 ಲಕ್ಷಗಳಿಗೆ ಮೇಲ್ಪಟ್ಟ ಠೇವಣಿಗಳಿಗೆ ಶೇ.0.50 ರಷ್ಟು ಹೆಚ್ಚಿನ ಬಡ್ಡಿ ನೀಡಲಾಗುವುದು. ಸದಸ್ಯರಲ್ಲದ ಠೇವಣಿದಾರರು ಒಂದು ವರ್ಷದಲ್ಲಿ ರೂ. 40,000/-ಕ್ಕೂ ಹೆಚ್ಚಿನ ಬಡ್ಡಿಯನ್ನು ಪಡೆದಲ್ಲಿ ಟಿ.ಡಿ.ಎಸ್. (TDS) ಅನ್ವಯವಾಗುತ್ತದೆ. ಠೇವಣಿಗಳನ್ನು ವಾಯಿದೆಗೆ ಮುಂಚಿತವಾಗಿ ಮುಕ್ತಾಯಗೊಳಿಸಿದಲ್ಲಿ ಠೇವಣಿ ಬಡ್ಡಿದರಕ್ಕಿಂತ ಶೇ.1ರಷ್ಟನ್ನು ಕಡಿತಗೊಳಿಸಿ, (ಮುಕ್ತಾಯಗೊಳಿಸಿದ ಅವಧಿಯ ಮೇಲೆ ಅವಲಂಬಿತ) ನೀಡಲಾಗುವುದು. ಠೇವಣಿಗೆ ಶೇ.90ರಷ್ಟು ಸಾಲ ಸೌಲಭ್ಯ ಒದಗಿಸಲಾಗಿದು.
ಕನಿಷ್ಠ ಒಂದು ವರ್ಷಕ್ಕೆ ರೂ. 500/- ಕ್ಕೆ ಕಡಿಮೆ ಇಲ್ಲದಂತೆ ಈ ಠೇವಣಿಯನ್ನು ತೆರೆಯಲಾಗುವುದು. ಈ ಖಾತೆಯಲ್ಲಿ ಮೂರೂ ತಿಂಗಳಿಗೊಮ್ಮೆ ಬಡ್ಡಿಯನ್ನು ಅಸಲಿನೊಂದಿಗೆ ಸೇರಿಸಲಾಗುವುದು. ಉಳಿದ ನಿಯಮಗಳು ನಿಶ್ಚಿತ ಠೇವಣಿಯ ನಿಯಮದಂತೆ ಅನ್ವಯಿಸುತ್ತದೆ.
ಕನಿಷ್ಠ ಅವಧಿ ಒಂದು ವರ್ಷ ಹಾಗೂ ಕನಿಷ್ಠ ಮೊಬಲಗು ರೂ.100/-ಹೂಡಿಕೆ ಮಾಡಬಹುದು. ಪ್ರತಿ ತಿಂಗಳು ಕ್ರಮರೀತ್ಯಾ ಪಾವತಿ ಮಾಡಬೇಕಾಗಿರುತ್ತದೆ, ಆದರೂ ಪಾವತಿ ಮಾಡಲು ಏಳು ದಿವಸಗಳ ರಿಯಾಯಿತಿ ಲಭ್ಯವಿದೆ. ತಪ್ಪಿದಲ್ಲಿ ಪ್ರತಿ ತಿಂಗಳು ಕಂತಿನ ಹಣದ ಮೇಲೆ ಶೇ.1.5 ರಷ್ಟು ಸುಸ್ತಿ ಬಡ್ಡಿಯನ್ನು ವಸೂಲಿ ಮಾಡಲಾಗುವುದು. ನಿಶ್ಚಿತ ಠೇವಣಿಗೆ ನೀಡಲಾಗುವ ಬಡ್ಡಿದರವೇ ಈ ಖಾತೆಗೆ ಅನ್ವಯವಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನು ಲೆಕ್ಕಾಚಾರ ಮಾಡಲಾಗುವುದು. ಖಾತೆಯನ್ನು ಅರ್ಧಕ್ಕೆ ನಿಲ್ಲಿಸಿದಲ್ಲಿ ಕಟ್ಟಿರುವ ಮೊಬಲಗನ್ನು ವಾಯಿದೆ ಮುಗಿದ ನಂತರವೂ ಪಡೆಯಬಹುದು. ಈ ಠೇವಣಿಯ ಮೇಲಿನ ಬಡ್ಡಿಗೆ ಯಾವುದೇ ತೆರನಾದ ಆದಾಯ ತೆರಿಗೆ ಇರುವುದಿಲ್ಲ. ಈ ಠೇವಣಿಗೆ ಹಿರಿಯ ನಾಗರಿಕರಿಗೆ ನೀಡಲಾಗುವ ಹೆಚ್ಚುವರಿ ಬಡ್ಡಿದರ ಅನ್ವಯಿಸುವುದಿಲ್ಲ.
ವ್ಯಾಪಾರಸ್ಥರು, ಸಣ್ಣ ಉದ್ಯಮದಾರರಿಗೆ ತಮ್ಮ ಆಕಸ್ಮಿಕ ಯಾ ವಾರ್ಷಿಕ ಖರ್ಚು ವೆಚ್ಚಗಳಿಗೆ ಅನುಕೂಲವಾಗುವಂತೆ ಈ ಠೇವಣಿಯನ್ನು ಸಂಗ್ರಹಣೆ ಮಾಡಲಾಗುವುದು. ಬ್ಯಾಂಕಿನಿಂದ ನೇಮಿಸಲ್ಪಟ್ಟ ಪಿಗ್ಮಿ ಸಂಗ್ರಹಕಾರರು ತಮ್ಮ ವ್ಯವಹಾರಗಳನ್ನು ನಡೆಸುತ್ತಿರುವ ಸ್ಥಳಗಳಿಗೆ ತೆರಳಿ ಹಣವನ್ನು ಪಡೆದು ಬ್ಯಾಂಕಿಗೆ ಜಮಾ ಮಾಡುತ್ತಾರೆ. ಇಂದು ನೀಡಿದ ಮೊತ್ತವು ಬ್ಯಾಂಕಿನಲ್ಲಿ ಮಾರನೇ ದಿನ ತಮ್ಮ ಖಾತೆಗೆ ಜಮಾ ಆಗುತ್ತದೆ. ಸದ್ಯದಲ್ಲಿ 30 ಜನ ಪಿಗ್ಮಿ ಸಂಗ್ರಹಕಾರರು ಕಾರ್ಯನಿರ್ವಹಿಸುತ್ತಿರುತ್ತಾರೆ. ಪಿಗ್ಮಿ ಸಂಗ್ರಹಕಾರರಿಗೆ ಶೇ.2.5ರಷ್ಟು ಅವರು ಸಂಗ್ರಹಿಸಿದ ಠೇವಣಿಯ ಮೇಲೆ ದಳ್ಳಾಳಿ ನೀಡಲಾಗುವುದು. ಪ್ರತಿ ಸಂಗ್ರಹಕಾರರಿಗೂ ಎಲೆಕ್ಟ್ರಾನಿಕ್ ಡಿವೈಸ್ ನೀಡಿದ್ದು, ಆ ಕ್ಷಣದಲ್ಲೇ ರಸೀತಿಯನ್ನು ನೀಡುತ್ತಾರೆ. ತಾವು ನೀಡಿದ ಹಣಕ್ಕೆ ರಸೀತಿಯನ್ನು ತಪ್ಪದೇ ಕೇಳಿ ಪಡೆಯಬೇಕು. ಈ ಖಾತೆಗೆ ಪ್ರತಿ ದಿನ ಕನಿಷ್ಠ 50/-ರೂ ಗಳನ್ನೂ ಜಮಾ ಮಾಡಬಹುದಾಗಿದೆ. ಠೇವಣಿಯ ಕನಿಷ್ಠ 13 ತಿಂಗಳಾಗಿದ್ದು ಗರಿಷ್ಠ 5 ವರ್ಷಗಳಾಗಿರುತ್ತದೆ. ವಾಯಿದೆ ಮೊದಲೇ ವಾಪಸ್ಸು ಪಡೆಯಲು ಅವಕಾಶವಿದ್ದರೂ, ಆ ಸಂದರ್ಭದಲ್ಲಿ ಶೇ.2.5ರ ದಂಡವನ್ನು ವಸೂಲಿ ಮಾಡಲಾಗುವುದು. ಈ ಠೇವಣಿಯನ್ನು 13 ತಿಂಗಳ ನಂತರ 60 ತಿಂಗಳ ಒಳಗೆ ವಾಪಸ್ಸು ಪಡೆದಲ್ಲಿ ಶೇ.2 ಮತ್ತು 60 ತಿಂಗಳಿಗೂ ಮೇಲ್ಪಟ್ಟ ಅವಧಿಗೆ ಶೇ.4ರಂತೆ ಬಡ್ಡಿ ನೀಡಲಾಗುವುದು. ಸದ್ರಿ ಖಾತೆಯಲ್ಲಿ ಜಮಾ ಆಗಿರುವ ಠೇವಣಿ ಮೊತ್ತದ ಮೇಲೆ ಶೇ.90ರಷ್ಟು ಸಾಲ ನೀಡಲಾಗುವುದು ಮತ್ತು ಈ ಸಾಲಕ್ಕೆ ಶೇ.12ರ ಬಡ್ಡಿಯನ್ನು ವಸೂಲಿ ಮಾಡಲಾಗುವುದು.
© 2014 The Hotel Industrialist's Co-Operative Bank Ltd., All Rights Reserved
The Hotel Industrialist's Co-Operative Bank Ltd., also known as Hotel Bank.
Powered By : EMS WEBTECH PVT.LTD.,