ಬ್ಯಾಂಕಿನಲ್ಲಿ ಲಭ್ಯವಿರುವ ಸಾಲ ಸೌಲಭ್ಯಗಳು:


ಈ ಕೆಳಗಿನ ಎಲ್ಲಾ ಸಾಲಗಳನ್ನು ಅತ್ಯಂತ ಸರಳವಾಗಿ ಅತಿ ಶೀಘ್ರದಲ್ಲಿ ಬ್ಯಾಂಕಿನ ಸಾಲ ಮತ್ತು ಮುಂಗಡಗಳ ಮಂಜೂರಾತಿ ಹಾಗೂ ವಸೂಲಾತಿ ನಿಯಮಾವಳಿಗಳಂತೆ ಮಂಜೂರು ಮಾಡಲಾಗುವುದು. ಯಾವುದೇ ಸಾಲವನ್ನು ಮಂಜೂರು ಮಾಡುವಲ್ಲಿ ಅರ್ಜಿದಾರ ಹಾಗೂ ಜಾಮೀನುದಾರರ ಸಾಲ ಮರುಪಾವತಿ ಸಾಮರ್ಥ್ಯ, ಹಿಂದೆ ಪಡೆದ ಸಾಲಗಳ ಮರುಪಾವತಿ ಇವುಗಳನ್ನು ಗಮನಿಸಿ ಮಂಜೂರು ಮಾಡಲ್ಪಡುತ್ತದೆ. ಯಾವುದೇ ಸಾಲದ ಅರ್ಜಿಯನ್ನು ಪೂರ್ತಿ ಯಾ ಭಾಗಶಃ ಪುರಸ್ಕರಿಸುವ ಯಾ ತಿರಸ್ಕರಿಸುವ ಅಧಿಕಾರವು ಆಡಳಿತ ಮಂಡಳಿಯದ್ದಾಗಿರುತ್ತದೆ. ನಿರಾಕರಣೆಯನ್ನು ಸಹ ಅರ್ಜಿದಾರರಿಗೆ ತಿಳಿಸಲಾಗುದಿಲ್ಲ. ಭದ್ರತಾ ಸಾಲಗಳಿಗೆ ಶೇ. 2.5 ರಷ್ಟು, ಭದ್ರತಾ ರಹಿತ ಸಾಲಗಳಿಗೆ ಶೇ. 5 ರಷ್ಟು ಹೆಚ್ಚುವರಿ ಷೇರುಗಳನ್ನು ಪಡೆಯಬೇಕು.

(ಸೂಚನೆ : ಷೇರು ಒಂದಕ್ಕೆ ರೂ.100/- ರಂತೆ ಗರಿಷ್ಠ 2,500 ಷೇರುಗಳಿಂದ ರೂ. 2,50,000/- ಷೇರು ಮೊಬಲಗನ್ನು ಮಾತ್ರ ಪಡೆಯಬಹುದಾಗಿದೆ. )




ಆಸ್ತಿ ಆಧಾರ ಸಾಲ:

ಆಸ್ತಿ ಅಡಮಾನ ಮಾಡಿ ಸಾಲ ಪಡೆಯುವ ಸಮಯದಲ್ಲಿ, ಆಸ್ತಿಯ ದಾಖಲೆ ಪತ್ರಗಳನ್ನು ಬ್ಯಾಂಕಿಗೆ ಸರಳ ಅಡಮಾನವಾಗಿ ನೋಂದಣಿ (ರಿಜಿಸ್ಟ್ರೇಷನ್) ಮಾಡಿಕೊಡಬೇಕಾಗಿರುತ್ತದೆ. ಇದಕ್ಕೆ ಸಾಲದ ಮೊತ್ತದ ಶೇ. 0.10 ರಷ್ಟು ನೋಂದಣಿ ಮತ್ತು ಸ್ಟಾಂಪ್ ಶುಲ್ಕವನ್ನು ಭರಿಸಬೇಕಾಗುತ್ತದೆ. ತಮ್ಮ ನಿವೇಶನ ಯಾ ಆಸ್ತಿಯ ಮೌಲ್ಯವನ್ನು ಬ್ಯಾಂಕಿನ ಮೌಲ್ಯ ಮಾಪಕರು ನೀಡಿದ ಮೌಲ್ಯದ ಶೇ. 60 ಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆಸ್ತಿ ದಾಖಲೆ ಪತ್ರಗಳಿಗೆ ವಕೀಲರಿಂದ ಪರಿಶೀಲನಾ ವರದಿಯನ್ನು ಸಹ ಪಡೆಯಲಾಗುವುದು.




ಪೀಠೋಪಕರಣ ಸಾಲ :

ಸಣ್ಣ ಸಣ್ಣ ವ್ಯಾಪಾರ ವ್ಯವಹಾರಗಳನ್ನು ನಡೆಸುವ ಸದಸ್ಯರು ತಮ್ಮ ಸಂಸ್ಥೆಯಲ್ಲಿರುವ ಹಳೆ ಪೀಠೋಪಕರಣ ಮತ್ತು ಯಂತ್ರೋಪಕರಣಗಳನ್ನು ಬ್ಯಾಂಕಿನಲ್ಲಿ ಅಡಮಾನ ಮಾಡಿ, ಆ ಉಪಕರಣಗಳ ಮಾರುಕಟ್ಟೆಯ ಬೆಲೆಯನ್ನಾಧರಿಸಿ, ಬೆಲೆಯ ಶೇ.60ಕ್ಕೆ ಮೀರದಂತೆ ಸಾಲ ಮಂಜೂರು ಮಾಡಲಾಗುತ್ತದೆ. ಸದ್ರಿ ಬೆಲೆಯನ್ನು ಬ್ಯಾಂಕಿನ ಮೌಲ್ಯ ನಿರ್ಣಯಕಾರರು ನಿರ್ಧರಿಸುತ್ತಾರೆ. ರೂ.1.00 ಲಕ್ಷಕ್ಕೂ ಮೇಲ್ಪಟ್ಟ ಸಾಲಕ್ಕೆ ಹೆಚ್ಚುವರಿ ಭದ್ರತೆಯನ್ನು ಪಡೆಯಲಾಗುವುದು. ಹೊಸ ಪೀಠೋಪಕರಣ ಯಾ ಯಂತ್ರೋಪಕರಣಗಳ ಅಳವಡಿಕೆ ಸಂದರ್ಭದಲ್ಲಿ ಶೇ. 25ರ ಅಂತರವನ್ನು (Margin) ಕಾಯ್ದುಕೊಳ್ಳಲಾಗುವುದು.




ವಾಹನ ಸಾಲ :

ಹೊಸ ವಾಹನಗಳನ್ನು ಕೊಳ್ಳಲು ವಾಹನದ ಮಾರುಕಟ್ಟೆ ಬೆಲೆಯ ಶೇ.75ರಷ್ಟು ಮೊಬಲಗನ್ನು ಸಾಲದ ರೂಪದಲ್ಲಿ ನೀಡಲಾಗುವುದು. ಉಳಿದ ಮೊಬಲಗನ್ನು ಸಾಲಗಾರರೇ ಭರ್ತಿ ಮಾಡಬೇಕಾಗಿರುತ್ತದೆ. ವಾಹನ ಕೊಳ್ಳುವ ಬಗ್ಗೆ ವಾಹನ ವಿತರಕ ಸಂಸ್ಥೆಯಿಂದ ಬಿಕರಿ ಪಟ್ಟಿಯನ್ನು ಬ್ಯಾಂಕಿಗೆ ಸಾಲದ ಅರ್ಜಿಯೊಂದಿಗೆ ನೀಡಬೇಕಾಗಿರುತ್ತದೆ. ಸಾಲಕ್ಕೆ ಒಬ್ಬ ಜಾಮೀನುದಾರರನ್ನು ನೀಡಬೇಕಾಗಿರುತ್ತದೆ. ವಾಹನದ ಮೊಬಲಗನ್ನು ನೇರವಾಗಿ ವಿತರಕ ಸಂಸ್ಥೆಗೆ ಪಾವತಿ ಮಾಡಲಾಗುತ್ತದೆ. ಹಣ ಪಾವತಿಯ ಬಗ್ಗೆ ಸಂಸ್ಥೆಯಿಂದ ಹಣಸಂದ ರಸೀತಿ, ಮತ್ತು ವಾಹನ ಪಡೆದ ನಂತರ ವಾಹನದ ಆರ್.ಸಿ.ಪುಸ್ತಕದ ಪ್ರತಿ, ವಿಮೆ, ಬಿಲ್ಲುಗಳನ್ನು ಬ್ಯಾಂಕಿಗೆ ತಂದು ಕೊಡಬೇಕಾಗಿರುತ್ತದೆ.




ಚಿನ್ನಾಭರಣ ಸಾಲ :

ಬ್ಯಾಂಕಿನ ಸದಸ್ಯರಿಗೆ ತಮ್ಮ ಚಿನ್ನಾಭರಣಗಳನ್ನು ಅಡಮಾನ ಮಾಡುವುದರೊಂದಿಗೆ ಗರಿಷ್ಠ ರೂ. 10,00,000/-ದ ವರೆಗೆ ಸಾಲ ಪಡೆಯಬಹುದಾಗಿದೆ. ಆಭರಣದ ಮಾರುಕಟ್ಟೆ ಬೆಲೆಯ ಮೇಲೆ ಶೇ.60ರ ಗರಿಷ್ಠ ಸಾಲವನ್ನು ಮಾತ್ರ ಮಂಜೂರು ಮಾಡಲಾಗುತ್ತದೆ. ಆಭರಣಗಳ ಮೌಲ್ಯವನ್ನು ಮೌಲ್ಯ ನಿರ್ಣಯಕಾರರಿಂದ ನಿರ್ಧರಿಸಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದಂತೆ ಮರುಪಾವತಿಯ ಗರಿಷ್ಠ ಅವಧಿ 12 ತಿಂಗಳಿಗೆ ಮೀಸಲಾಗಿರಿಸಿದೆ.




ಜಾಮೀನು ಸಾಲ:

ಜಾಮೀನು ಸಾಲವನ್ನು ಒಬ್ಬರು ಯಾ ಹೆಚ್ಚಿನ ಜಾಮೀನುದಾರರ ವೈಯಕ್ತಿಕ ಜವಾಬ್ದಾರಿಗಳ ಮೇಲೆ ನೀಡಲಾಗುತ್ತದೆ. ರೂ. 25,000/- ಗಳ ಮೇಲ್ಪಟ್ಟ ಸಾಲಕ್ಕೆ ಸರ್ಕಾರಿ ಯಾ ಅರೆ ಸರ್ಕಾರಿ ಉದ್ಯೋಗಿಗಳ ಜಾಮೀನು ಅಗತ್ಯವಾಗಿರುತ್ತದೆ.




ಮಹಿಳಾ ಸ್ವಯಂ ಉದ್ಯೋಗ ಸಾಲ ಸೌಲಭ್ಯ :

ಬ್ಯಾಂಕಿನ ಮಹಿಳಾ ಸ್ವಯಂ ಉದ್ಯೋಗಸ್ಥ ಸದಸ್ಯರಿಗೆ ಆರ್ಥಿಕ ನೆರವು ನೀಡಲು, ಹಾಲಿ ಬ್ಯಾಂಕು ನೀಡುತ್ತಿರುವ ಜಾಮೀನು ಸಾಲದ ಅಡಿಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಪ್ರತಿ ವರ್ಷ 30 ಮಹಿಳಾ ಸ್ವ ಉದ್ಯೋಗಸ್ಥ ಸದಸ್ಯರಿಗೆ ರೂ.50,000/-ಗಳನ್ನು ಶೇ. 6ರ ಬಡ್ಡಿದರದಲ್ಲಿ ನೀಡಲಾಗುವುದು. ಈ ಸಾಲವನ್ನು 50 ಸಮ ಕಂತುಗಳಲ್ಲಿ ಅಸಲು ಮತ್ತು ಬಡ್ಡಿ ಸಹಿತ ಪಾವತಿಸತಕ್ಕದ್ದು. ಜಾಮೀನು ಸಾಲಕ್ಕೆ ಇರುವ ನಿಯಮಗಳು ಈ ಸಾಲಕ್ಕೂ ಅನ್ವಯವಾಗುತ್ತದೆ. ಅಲ್ಲದೆ ಸದಸ್ಯರು ಸ್ವಯಂ ಉದ್ಯೋಗ ನಡೆಸುತ್ತಿರುವ ಬಗ್ಗೆ ದಾಖಲೆ ಪತ್ರಗಳನ್ನು ಅರ್ಜಿಯೊಂದಿಗೆ ನೀಡಬೇಕಾಗಿರುತ್ತದೆ. ಈ ಯೋಜನೆಯಡಿಯಲ್ಲಿ ಒಮ್ಮೆ ಪಡೆದ ಸಾಲ ಸುಸ್ತಿಯಾಗಿ ನಂತರ ಚುಕ್ತಾ ಮಾಡಿದಲ್ಲಿ ಮುಂದೆ ಈ ಸಾಲವನ್ನು ಪಡೆಯಲು ಅವಕಾಶವಿರುದಿಲ್ಲ. ಒಮ್ಮೆ ಪಡೆದ ಸಾಲವನ್ನು ಪೂರ್ತಿಯಾಗಿ ಚುಕ್ತಾವಾಗುವವರೆಗೂ ಬೇರೆ ಜಾಮೀನು ಸಾಲಗಳನ್ನು ಪಡೆಯಲು ಅರ್ಹರಾಗುವುದಿಲ್ಲ. ಸಾಲದ ಅರ್ಜಿ ಶುಲ್ಕದ ಹೊರತಾಗಿ ಯಾವುದೇ ಸೇವಾ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಸರಿಯಾದ ಸಾಲ ಮರುಪಾವತಿಗೆ ಮೇಲಿನ ಬಡ್ಡಿದರದಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ.




ಸದಸ್ಯರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹ ಸಾಲ ಸೌಲಭ್ಯ :

ಬ್ಯಾಂಕಿನ ಸದಸ್ಯರ ಮಕ್ಕಳ ಉನ್ನತ ಶಿಕ್ಷಣದ ನೆರವಿಗಾಗಿ ಈ ಯೋಜನೆಯನ್ನು ರೂಪಿಸಲಾಗಿದ್ದು, ಹಾಲಿ ಬ್ಯಾಂಕಿನಲ್ಲಿರುವ ಜಾಮೀನು ಸಾಲದ ನಿಯಮದಡಿಯಲ್ಲಿ ರಚಿಸಲಾಗಿದೆ. ಈ ಯೋಜನೆಯಲ್ಲಿ ಪ್ರತಿ ವರ್ಷ 30 ಸದಸ್ಯರಿಗೆ ಶೇ. 8ರ ಬಡ್ಡಿದರದಲ್ಲಿ ರೂ.2,00,000/-ಗಳ ಸಾಲವನ್ನು ಮಂಜೂರು ಮಾಡಲಾಗುವುದು. ಇದನ್ನು ಸಾಲ ಪಡೆದ ಮರು ತಿಂಗಳಿಂದಲೇ ಸಾಲ ಮರುಪಾವತಿ ಮಾಡಬೇಕಾಗಿರುತ್ತದೆ.ಇದನ್ನು 50 ಸಮ ತಿಂಗಳ ಕಂತುಗಳಲ್ಲಿ ಅಸಲು ಮತ್ತು ಬಡ್ಡಿ ಸಹಿತ ಮರುಪಾವತಿಸಬೇಕು. ಈ ಸಾಲ ಪಡೆದು ಒಮ್ಮೆ ಸುಸ್ತಿಯಾಗಿ ನಂತರ ಸಾಲ ಚುಕ್ತಾ ಮಾಡಿದಲ್ಲಿ ಪುನಃ ಈ ಸಾಲ ಲಭ್ಯವಿರುವುದಿಲ್ಲ. ಈ ಸಾಲಕ್ಕೆ ಅರ್ಜಿ ಸಲ್ಲಿಸ ಬಯಸುವ ಸದಸ್ಯರು ತಮ್ಮ ಮಕ್ಕಳು ವ್ಯಾಸಂಗ ಮಾಡುತ್ತಿರುವ ಯಾವುದೇ ಸ್ನಾತಕೋತ್ತರ, ವ್ಯೆದ್ಯಕೀಯ, ಹಾಗೂ ತಾಂತ್ರಿಕ ಪದವಿಗಳ ಬಗ್ಗೆ ದಾಖಲೆಗಳನ್ನು ಒದಗಿಸಬೇಕಾಗಿರುತ್ತದೆ.ಸಾಲದ ಅರ್ಜಿ ಶುಲ್ಕದ ಹೊರತಾಗಿ ಯಾವುದೇ ಸೇವಾ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಸರಿಯಾದ ಸಾಲ ಮರುಪಾವತಿಗೆ ಬಡ್ಡಿದರದಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ.




ಠೇವಣಿ ಆಧಾರ ಸಾಲ :

ಬ್ಯಾಂಕಿನ ಠೇವಣಿದಾರರು ತಮ್ಮ ಯಾವುದೇ ಠೇವಣಿಯನ್ನು ಆಧಾರ ಮಾಡಿ, ಅದರ ಮೇಲೆ ಗರಿಷ್ಠ ಶೇ.90 ರ ವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಸಾಲಕ್ಕೆ ಬ್ಯಾಂಕು ಠೇವಣಿಗಳಿಗೆ ನೀಡುವ ಬಡ್ಡಿಗಿಂತ ಶೇ. 2 ಹೆಚ್ಚಿನ ಬಡ್ಡಿಯನ್ನು ವಿಧಿಸಲಾಗುವುದು. ಹಿರಿಯ ನಾಗರಿಕರ ಠೇವಣಿ ಆಧಾರ ಸಾಲಗಳಿಗೆ ಸದ್ರಿ ದರದಲ್ಲಿ ಶೇ.1 ರ ವಿನಾಯಿತಿಯನ್ನು ನೀಡಲಾಗುತ್ತದೆ. ಈ ಸಾಲದ ಅವಧಿಯು ಠೇವಣಿಯ ಅವಧಿಯ ಮೇಲೆ ಅವಲಂಬಿತವಾಗಿರುತ್ತದೆ. ಅಥವಾ ಠೇವಣಿದಾರರು ಆ ಮೊದಲು ಕೂಡಾ ಪಾವತಿ ಮಾಡಬಹುದಾಗಿರುತ್ತದೆ.